ಕರಡುಸಾಲ ಅಥವಾ ಕರಡುಋಣ : ಒಂದು ಸಂಸ್ಥೆಗೋ ಒಬ್ಬ ವ್ಯಕ್ತಿಗೋ ತನ್ನ ದೇಣಿದಾರನಿಂದ (ಡೆಟರ್) ಬರಬೇಕಾಗಿದ್ದು, ಅವನಿಂದ ವಸೂಲಾಗುವ ಸಂಭವವಿಲ್ಲವೆಂದು ಕೈಬಿಟ್ಟ ಸಾಲ ಅಥವಾ ಋಣ (ಬ್ಯಾಡ್ ಡೆಟ್). ಇದನ್ನು ಸಾಮಾನ್ಯವಾಗಿ ನಷ್ಟವೆಂದು ಪರಿಗಣಿಸಿ, ಬರಬೇಕಾದ ಸಾಲಗಳ ಮೊತ್ತದಿಂದ ಕಳೆಯಲಾಗುತ್ತದೆ.

ಕೆಲವು ಪರಿಸ್ಥಿತಿಗಳಲ್ಲಿ ಕೆಲವಾರು ಕಾರಣಗಳಿಂದಾಗಿ ಗ್ರಾಹಕರು ತಮ್ಮ ಸಾಲವನ್ನು ನಿಯಮಿತ ಅವಧಿಯೊಳಗೆ ತೀರಿಸದೆ ಹೋಗಬಹುದು. ಅದರೆ ಅವರು ಮುಂದಾದರೂ ಆ ಸಾಲವನ್ನು ಪಾವತಿ ಮಾಡಿಯಾರು ಎಂಬ ಆಸೆ ವ್ಯಾಪಾರಿಗೆ ಇದ್ದರೆ ಅಂಥ ಸಾಲವನ್ನು ಕರಡುಸಾಲವೆಂದು ಪರಿಗಣಿಸುವುದಿಲ್ಲ. ಅಂಥ ಸಾಲವನ್ನು ಸಂದೇಹಾಸ್ಪದವೆಂದು ಪರಿಗಣಿಸಲಾಗುತ್ತದೆ. ಆದರೆ ಯಾವ ಸಾಲ ನಿರ್ದಿಷ್ಟವಾಗಿ ಮತ್ತು ಖಚಿತವಾಗಿ ಹಿಂದಕ್ಕೆ ಬರುವ ಸಂಭವವಿಲ್ಲವೋ ಅಂಥದು ಮಾತ್ರ ಕರಡು ಸಾಲ.

ಯಾವುದೇ ಒಂದು ಸಾಲ ಕರಡು ಸಾಲವೆಂದು ತೀರ್ಮಾನವಾದರೆ ಅದು ವ್ಯಾಪಾರಿಗೆ ಪುರ್ತಿ ನಷ್ಟ. ಅಂಥ ನಷ್ಟವನ್ನು ವ್ಯಾಪಾರಿ ತನ್ನ ವಾರ್ಷಿಕ ಲಾಭ ನಷ್ಟ ಲೆಕ್ಕದಲ್ಲಿ ನಷ್ಟವೆಂದು ತೋರಿಸಬೇಕಾಗುತ್ತದೆ. ಸಾಮಾನ್ಯವಾಗಿ ಕರಡುಸಾಲ ವ್ಯಾಪಾರಿಯ ಸರಕು ಮಾರಾಟದ ವ್ಯವಹಾರಗಳಿಂದ ಉದ್ಭವಿಸುವುದರಿಂದ ಅಂಥ ನಷ್ಟವನ್ನು ಅದೇ ಬಗೆಯ ವ್ಯವಹಾರಗಳಿಗೆ ಸಂಬಂಧಿಸಿದ ನಷ್ಟವೆಂದು ಪರಿಗಣಿಸಬೇಕು.
ಈ ನಷ್ಟ ಖಾತರಿಯಾದ ವರ್ಷದ ಲೆಕ್ಕಗಳಲ್ಲಿ ಈ ಬಗ್ಗೆ ದಾಖಲೆ ಮಾಡಿ, ಸಂಬಂಧಪಟ್ಟ ದೇಣಿದಾರರ ಲೆಕ್ಕಗಳಲ್ಲಿ ಇದನ್ನು ಕಳೆದ ಮೇಲೆ-ಎಂದರೆ ಅವರ ಲೆಕ್ಕಗಳನ್ನು ಮುಕ್ತಾಯ ಮಾಡಿದ ಮೇಲೆ-ಮುಂದೆ ಎಂದೋ ಅನಿರೀಕ್ಷಿತವಾಗಿ ಈ ಹಣ ಬರಬಹುದು. ಅಗ ಅದನ್ನು ಬಂಡವಾಳ ಲಾಭವೆಂದು ಪರಿಗಣಿಸಬೇಕಾಗುತ್ತದೆ.

ಕೆಲವು ದೊಡ್ಡ ವ್ಯಾಪಾರಿ ಸಂಸ್ಥೆಗಳಲ್ಲಿ ಗ್ರಾಹಕರ ಸಂಖ್ಯೆ ಹೆಚ್ಚಾಗಿರುವುದರಿಂದ ಕರಡುಸಾಲ ಬಹಳ ಹೆಚ್ಚಿನ ಪರಿಮಾಣದಲ್ಲಿರುತ್ತದೆ. ಭವಿಷ್ಯದಲ್ಲಿ ಉದ್ಭವಿಸಬಹುದಾದ ಕರಡು ಸಾಲದ ಪ್ರಮಾಣವೂ ಅಗಾಧವಾಗಿರುತ್ತದೆ. ದೇಶದ ಆರ್ಥಿಕ ಸ್ಥಿತಿಯಲ್ಲಿ ಉಂಟಾಗುವ ಏರುಪೇರು, ಸರ್ಕಾರದ ಆರ್ಥಿಕ ಧೋರಣೆ ಮತ್ತು ವಾಣಿಜ್ಯಕ್ಷೇತ್ರದಲ್ಲಿ ಉಂಟಾಗುವ ಮಹತ್ತರ ಬದಲಾವಣೆಗಳಿಂದಾಗಿ ಅನೇಕ ಗ್ರಾಹಕರು ತಮ್ಮ ವ್ಯಾಪಾರದ ಮತ್ತು ನಗದು ಜವಾಬ್ದಾರಿಗಳನ್ನು ಪುರೈಸಲು ಅಸಮರ್ಥರಾಗಬಹುದು. ಈ ಕಾರಣಗಳಿಂದಾಗಿ ಕೆಲವು ವ್ಯವಹಾರ ಸಂಸ್ಥೆಗಳಲ್ಲಿ ವಿಶೇಷ ರೀತಿಯ ಮತ್ತು ಅತಿಹೆಚ್ಚಿನ ಪ್ರಮಾಣದ ಕರಡುಸಾಲ ಸಂಭವಿಸಬಹುದು. ಹಲವು ವರ್ಷಗಳ ವ್ಯವಹಾರದ ಫಲವಾದ ನಷ್ಟವನ್ನು ಅದು ಸಂಭವಿಸಿದ ವರ್ಷದ ಲಾಭ-ನಷ್ಟ ಲೆಕ್ಕದಲ್ಲಿ ತೋರಿಸುವುದು ಅವೈಜ್ಞಾನಿಕವಾಗುತ್ತದೆ. ಇದರಿಂದ ಆ ವರ್ಷದ ಲಾಭಪರಿಸ್ಥಿತಿಯ ಮೇಲೆ ವಿಪರೀತ ಪರಿಣಾಮ ಉಂಟಾಗಬಹುದು. ಆದ್ದರಿಂದ ಇದಕ್ಕೆ ಪ್ರತ್ಯೇಕವಾಗಿ ಕರಡುಸಾಲದ ಮೀಸಲನ್ನು (ಬ್ಯಾಡ್ ಡೆಟ್ಸ್‌ ರಿಸರ್ವ್) ನಿರ್ಮಿಸಬೇಕಾದ ಆವಶ್ಯಕತೆಯುಂಟಾಗುತ್ತದೆ. ಪ್ರತಿವರ್ಷವೂ ಸಂಸ್ಥೆಯ ದೇಣಿದಾರರಿಂದ ಬರಬೇಕಾದ ಮೊಬಲಗಿನ ಒಂದು ನಿರ್ದಿಷ್ಟ ಶೇಕಡ ಪ್ರಮಾಣವನ್ನು ಮೀಸಲಾಗಿ ತೆಗೆದಿಟ್ಟು ಇದನ್ನು ಲಾಭನಷ್ಟ ಲೆಕ್ಕದಲ್ಲಿ ಋಣಿಸಬೇಕು (ಡೆಬಿಟ್). ಕರಡುಸಾಲದಿಂದ ಸಂಭವಿಸುವ ನಷ್ಟವನ್ನು ಈ ಮೀಸಲಿನಿಂದ ತುಂಬಿಸಿಕೊಳ್ಳಲಾಗುತ್ತದೆ. ಮೀಸಲು ಹಣವನ್ನು ಯಾವಾಗಲೂ ಒಟ್ಟು ದೇಣಿದಾರರಿಂದ ಬರಬೇಕಾದ ಸಾಲದ ಮೊಬಲಗಿನ ನಿರ್ದಿಷ್ಟ ಶೇಕಡ ಪ್ರಮಾಣವಾಗಿ ಮುಂದುವರಿಸಿಕೊಂಡು ಹೋಗಲಾಗುತ್ತದೆ. ಈ ಕ್ರಮದಿಂದ ಯಾವುದೇ ಒಂದು ವರ್ಷದ ಲಾಭ-ನಷ್ಟ ಸ್ಥಿತಿಯ ಮೇಲೆ ಅನುಚಿತ ಭಾರ ಹೇರಿದಂತಾಗುವುದಿಲ್ಲ.

ಕರಡುಸಾಲದ ಸಂಭವವನ್ನು ಕಡಿಮೆ ಮಾಡುವ ಸಲುವಾಗಿ, ಪದಾರ್ಥ ಮಾರುವಾಗಲೇ ಯಾವ ಬಗೆಯ ಗ್ರಾಹಕರಿಗೆ ಉದ್ದರಿ ಮಾರಾಟ ಮಾಡಬಹುದೆಂಬ ಬಗ್ಗೆ ಸಂಸ್ಥೆಯ ಮಾರಾಟವಿಭಾಗ ಮುನ್ನೆಚ್ಚರಿಕೆಯಿಂದ ನಿರ್ಧರಿಸಿಕೊಳ್ಳಬೇಕು. ಈ ದೆಸೆಯಲ್ಲಿ ವಿಶೇಷವಾದ ಸಂಶೋಧನೆ ನಡೆಯುತ್ತಿದೆ. ಗ್ರಾಹಕರ ಹಣಕಾಸಿನ ಪರಿಸ್ಥಿತಿಯನ್ನು ಪರಿಶೋಧಿಸಿ ಮಾಹಿತಿ ಒದಗಿಸುವ ಸಲುವಾಗಿಯೇ ಅನೇಕ ಸಂಸ್ಥೆಗಳು ವಿಶಿಷ್ಟವಾಗಿ ಕೆಲಸ ಮಾಡುತ್ತಿವೆ. ಇವುಗಳ ಸಲಹೆಯಂತೆ ಉದ್ದರಿ ವ್ಯವಹಾರ ನಡೆಸುವುದರಿಂದ ನಷ್ಟ ಸಂಭವ ಕಡಿಮೆ.
ಅಮೆರಿಕ ಸಂಯುಕ್ತ ಸಂಸ್ಥಾನ ಮುಂತಾದ ಪಾಶ್ಚಾತ್ಯ ದೇಶಗಳಲ್ಲಿ ಗ್ರಾಹಕರ ಬಗ್ಗೆ ಅಂಕಿ-ಅಂಶ ಒದಗಿಸುವ ಸಂಸ್ಥೆಗಳು ಹಲವಾರಿವೆ. ಆದರೆ ಭಾರತದಲ್ಲಿ ಈ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ನಡೆದಿಲ್ಲ. ಇಲ್ಲೂ ಈ ಬಗೆಯ ಸಂಸ್ಥೆಗಳ ಆವಶ್ಯಕತೆಯ ಮನವರಿಕೆಯಾಗಿದೆ. 
(ಸಿ.ಎಂ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ